ಹುಲಗೂರು ಕೃಷ್ಣಾಚಾರ್ಯ
	1891-1951. ಸಂಗೀತ ವಿದ್ವಾಂಸರು. 1891ರಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿದರು. ಇವರ ತಂದೆ ಸಂಗೀತ ವಿದ್ವಾಂಸರಾದ ವೆಂಕಣ್ಣಾಚಾರ್ಯ. ಮೆಟ್ರಿಕ್ಯುಲೇಶನ್ ತೇರ್ಗಡೆಯಾದ ಅನಂತರ ಕೃಷ್ಣಚಾರ್ಯರು ಆಗಿನ ಮೈಸೂರು ಸಂಸ್ಥಾನದ ರೈಲ್ವೆಯಲ್ಲಿ ಡ್ರಾಫ್ಟ್ಸ್‍ಮನ್ ಆಗಿ ಸೇವೆಸಲ್ಲಿಸಿದರು. 

	ಸಂಸ್ಕøತ ಮತ್ತು ಕನ್ನಡ ಭಾಷೆಗಳಲ್ಲಿ ಇವರಿಗೆ ಪಾಂಡಿತ್ಯವಿತ್ತು. ಮೊದಲಿನಿಂದಲೂ ಸಂಗೀತಕಲೆಯ ಬಗ್ಗೆ ಅಭಿರುಚಿ ಇದ್ದುದರಿಂದ ಇವರು ಸಂಗೀತಶಾಸ್ತ್ರ ಮತ್ತು ವಾದ್ಯಗಳನ್ನು ಕುರಿತು ಆಳ ಅಧ್ಯಯನಕ್ಕೆ ತೊಡಗಿದರು. ಕರ್ಣಾಟಕ ಸಂಗೀತಶಾಸ್ತ್ರವಿಮರ್ಶಾ ಎಂಬ ಕನ್ನಡ ಗ್ರಂಥವನ್ನೂ ಶ್ರುತಿಸಿದ್ಧಾಂತ ಎಂಬ ಶ್ರುತಿವಿಚಾರವನ್ನು ಕುರಿತಾದ ಸಂಸ್ಕøತ ಗ್ರಂಥವನ್ನೂ ಇವರು ರಚಿಸಿದರು. ಸಂಗೀತಶಾಸ್ತ್ರವನ್ನು ಕುರಿತಂತೆ ಇವರು ಹಲವು ಲೇಖನಗಳೂ ಪ್ರಕಟವಾಗಿವೆ. ಆಧುನಿಕ ಕಾಲದಲ್ಲಿ ದುರ್ಲಭವಾದ, ಹೊಸ ರೀತಿಯ ವೀಣೆಗಳಾದ ಕಿನ್ನರಿವೀಣಾ ಮತ್ತು ವಿಶ್ವವೀಣಾ ಎಂಬ ವಾದ್ಯಗಳನ್ನು ರೂಪಿಸಿ ಅವುಗಳನ್ನು ನುಡಿಸುವ ವಿಧಾನವನ್ನು ಪ್ರಚಲಿತಗೊಳಿಸಿದವರೂ ಇವರೇ. ಕಿನ್ನರಿ ಕೃಷ್ಣಾಚಾರ್ಯ ರೆಂದೂ ಇವರು ಪ್ರಸಿದ್ಧರಾದರು. ಇವರಲ್ಲಿ ಸಂಗೀತಶಾಸ್ತ್ರಕ್ಕೆ ಸಂಬಂಧಿಸಿದ ಅಮೂಲ್ಯವಾದ ಪುಸ್ತಕ ಭಂಡಾರವಿತ್ತು. ಹುಬ್ಬಳ್ಳಿಯಲ್ಲಿ ಭಾರತ ಸಂಗೀತಶಾಲಾ ಎಂಬ ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿ ನಡೆಸುತ್ತಿ ದ್ದರು. ಮೈಸೂರಿನ ರಾಜಾಸ್ಥಾನದ ಗೌರವ ಮತ್ತು ಸನ್ಮಾನಗಳನ್ನು ಪಡೆದಿದ್ದ ಇವರು 1951ರಲ್ಲಿ ಹುಬ್ಬಳ್ಳಿಯಲ್ಲಿ ನಿಧನರಾದರು. 			
(ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ